Loading

Dhyeya Software Solutions Pvt. Ltd.

+91 80 4146 7834 Get A Quote

ರಾಜ್ಯದ ಸಮಸ್ಯೆಗಳ ಪರಿಹಾರವೇ ಮುಖ್ಯವಾದದ್ದರಿಂದ ವ್ಯಕ್ತಿದೂಷಣೆಗಿಂತ ಜನರ ಕಷ್ಟಕ್ಕೆ ಸ್ಪಂದಿಸಲು ಮೊದಲ ಆದ್ಯತೆ ನೀಡೋಣ : ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ

 

ಏ.15 : ರಾಜ್ಯದ ಸಮಸ್ಯೆಗಳ ಪರಿಹಾರವೇ ಮುಖ್ಯವಾದದ್ದರಿಂದ ವ್ಯಕ್ತಿದೂಷಣೆಗಿಂತ ಜನರ ಕಷ್ಟಕ್ಕೆ ಸ್ಪಂದಿಸಲು ಮೊದಲ ಆದ್ಯತೆ ನೀಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಹೇಳಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕುಮಾರ ಪಥ 2018 ರ ಅಂಗವಾಗಿ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಮಾರಸ್ವಾಮಿಯವರು ಕಾರ್ಯಕರ್ತರ ಹಲವು ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡಿದರು.

ಗಿರೀಶ್ ಮೈಸೂರ್ ರವರು ಹೊಸದಾಗಿ ಪ್ರಾರಂಭವಾಗುವ ಕಂಪೆನಿಗಳಿಗೆ ಯೋಜನೆಗಳೇನಿರಬೇಕೆಂದು ಪ್ರಶ್ನಿಸಿದಾಗ,  ಕುಮಾರಸ್ವಾಮಿಯವರು ಹೊಸ ಕಂಪೆನಿಗಳಿಗೆ ಸರ್ಕಾರವೇ ಎರಡು ಯಾ ಮೂರು ಪರ್ಸೆಂಟ್ ನಷ್ಟು ಇನ್ಸೆಂಟಿವ್ಸ್ ಕೊಟ್ಟು ಅಭಿವೃದ್ಧಿಯ ಅನುದಾನ ನೀಡುವ ಕುರಿತು ಆಲೋಚನೆ ಇದೆ ಎಂದರು.

ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ಯಾವ ರೀತಿ ಮಾನ್ಯತೆ ಒದಗಿಸುವ ಯೋಜನೆಗಳನ್ನು ರೂಪಿಸಲಿದ್ದೀರಿ ಎಂದು ವಿದ್ಯಾ ಮೈಸೂರ್ ರವರು ಪ್ರಶ್ನಿಸಿದಾಗ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುವುದರೊಂದಿಗೆ ಹವಮಾನಕ್ಕೆ ತಕ್ಕುದಾದ ಬೆಳೆಗಳನ್ನು ಬೆಳೆಯುವುದರ ಕಡೆಗೆ ನವಯುವಕರ ಗಮನ ಸೆಳೆದು, ಟೆಕ್ನಿಕಲಿ ಹಾಗೂ ಫೈನಾನ್ಶಿಯಲ್ ಸಪೋರ್ಟ್ ನೀಡುವ ಯೋಜನೆಗಳನ್ನು ಸರ್ಕಾರ ಮುಂದಿನ ದಿನಗಳಲ್ಲಿ ರೂಪಿಸಲಿದೆ ಎಂದು ಕುಮಾರಸ್ವಾಮಿಯವರು ಉತ್ತರಿಸಿದರು.

ಮಂಗಳೂರಿನ ದೇವಿಪ್ರಸಾದ್ ನಾಯಕ್ ರವರು ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳಬಹುದೆಂದು ನಿಮ್ಮ ಅನಿಸಿಕೆ ಎಂದು ಪ್ರಶ್ನಿಸಿದಾಗ, ಸಾಮಾಜಿಕ ಜಾಲತಾಣಗಳ ಮೂಲಕ ತ್ವರಿತ ಸಮಸ್ಯೆ ಪರಿಹಾರ ಕ್ರಮದ ಜೊತೆಗೆ ತಕ್ಷಣ ಸ್ಪಂದನ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಜನಪರ ಕಾಳಜಿ ವ್ಯಕ್ತಪಡಿಸಿದರು.

ಗೋವಾದ ಖುರೇಷ್ ರವರು ಒತ್ತುವರಿ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತೀರೆಂದು ಪ್ರಶ್ನಿಸಿದಾಗ ಸಾವಿರ ಕೆರೆಗಳ ನಗರದಲ್ಲಿ ಕೆರೆಗಳನ್ನು ಮುಚ್ಚಿ ಒತ್ತುವರಿಯ ಅಕ್ರಮಕ್ಕೆ ಮುಂದಾದವರನ್ನು, ಅಕ್ರಮ ಬಿಲ್ಡರ್ ಗಳನ್ನೂ ಕಾನೂನು ಕ್ರಮದ ಮೂಲಕ ತಡೆಯುವುದಲ್ಲದೇ, ಹೂಳು ತೆಗೆದು, ಇರುವ ಕೆರೆಗಳ ಕ್ಷಮತೆ ಹೆಚ್ಚಿಸುವ ಆಲೋಚನೆ ಇದೆ ಎಂದು ಕುಮಾರಸ್ವಾಮಿಯವರು ನುಡಿದರು.

ನಾಗಮಂಗಲದ ಛಾಯಾಕುಮಾರ್ ರವರು ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚಿನ ಆದಾಯ ತರಿಸುವುದರ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದಾಗ ಪ್ರಕೃತಿ ಸಂಪತ್ತನ್ನು ಆರ್ಥಿಕ ಅಭಿವೃದ್ಧಿಯೊಂದಿಗೇ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕಾದ ಅವಶ್ಯಕತೆ ಇದೆ. ಪ್ರವಾಸಿ ತಾಣಗಳಲ್ಲಿ ವಿಶ್ರಾಂತಿ ಕೊಠಡಿಯಂತವುಗಳು ಕೂಡಾ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಯ ಅವಕಾಶಗಳೂ ಪ್ರವಾಸೋದ್ಯಮದಲ್ಲಿ ಹೆಚ್ಚಿರುವುದರಿಂದ, ಸಮಗ್ರ ದೃಷ್ಟಿಯಿಂದ ಅಭಿವೃದ್ಧಿಗೊಳಿಸುವತ್ತ ನಮ್ಮ ಚಿಂತನೆಯಿದೆ ಎಂದು ಕುಮಾರಸ್ವಾಮಿಯವರು ಹೇಳಿದರು.

ಏತನ್ಮಧ್ಯೆ ಸಭೆಯಲ್ಲಿ ಉಂಟಾದ ಗಲಭೆಗೆ ಉತ್ತರಿಸಿದ ಕುಮಾರಸ್ವಾಮಿಯವರು ಕರ್ನಾಟಕದ ಅಭಿವೃದ್ಧಿಯೇ ಮುಖ್ಯವಾದದ್ದರಿಂದ ಯಾವುದೇ ವ್ಯಕ್ತಿಗಳ ವಿರುದ್ಧ ಆರೋಪವನ್ನು ಮಾಡುವುದರಿಂದ ಪ್ರಯೋಜನವಿಲ್ಲ. ಹಾಗೆಯೇ ಸಮಗ್ರ ಕರ್ನಾಟಕ ಅಭಿವೃದ್ಧಿ ಮಾತ್ರ ನಮ್ಮ ಗುರಿ ಎಂದು ತಮ್ಮ ಎಂದಿನ ಅಭಿವೃದ್ಧಿಪರ ನಿಲುವು ತೋರಿದರು.

ರಾಮನಗರದ ಜಯಕುಮಾರ್ ಗೌಡರವರು ವಿದ್ಯಾರ್ಥಿ ಸಮುದಾಯಕ್ಕೆ ವಿದ್ಯೆಗೆ ತಕ್ಕುದಾದ ಉದ್ಯೋಗ ದೊರಕುವಂತೆ ಮಾಡಲು ನಿಮ್ಮ ಯೋಜನೆಗಳೇನು ಎಂದು ಪ್ರಶ್ನಿಸಿದಾಗ, ಕನಿಷ್ಟ ಒಂದು ಕೋಟಿ ಉದ್ಯೋಗವನ್ನು ಯುವಕರಿಗೆ ಹಾಗೂ ಕನ್ನಡಿಗರಿಗೆ ಸೃಜಿಸುವ ಯೋಜನೆಗಳು ಈಗಾಗಲೇ ನಮ್ಮಿಂದ ರೂಪಿಸಲಾಗಿದೆ. ಅವಕಾಶ ಸಿಕ್ಕಿದಲ್ಲಿ ಖಂಡಿತ ಜಾರಿಗೆ ತರುತ್ತೇವೆ ಎಂದರು.

ಉಡುಪಿಯ ರಾಕೇಶ್ ಶೆಟ್ಟಿಯವರು ಎಂಡೋಸಲ್ಫಾನ್ ಸಿಂಪಡಿಕೆಯಿಂದ ಹಲವರು ದ.ಕ ಬಳಲುತ್ತಿದ್ದಾರೆ. ಅವರಿಗೆ ನೆರವಿನ ಬಗ್ಗೆ ನಿಮ್ಮ ನಿಲುವೇನು ಎಂದು ಪ್ರಶ್ನಿಸಿದಾಗ ಸರ್ಕಾರದಿಂದ ಮೊದಲನೇ ಆದ್ಯತೆಯಾಗಿ ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರ ಕಾರ್ಯ ಕೈಗೊಳ್ಳಲಿದ್ದೇವೆ ಎಂದರು.

ರಾಘವೇಂದ್ರರವರು ರಸ್ತೆ ನಿರ್ಮಾಣ ಕಾಮಗಾರಿಗಳು ಕುಂಠಿತವಾಗಿ ಸಾಗುತ್ತಿರುವುದಕ್ಕೆ ನಿಮ್ಮ ಆಲೋಚನೆಗಳೇನು ಎಂದು ಪ್ರಶ್ನಿಸಿದಾಗ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಲ್ಲದೇ, ಎಲ್ಲಾ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ. ನಮ್ಮ ಸರ್ಕಾರದ ಯೋಜನೆಗಳು ಐವತ್ತು ವರ್ಷಗಳಿಗೂ ಮುಂದಿನ ದೂರದೃಷ್ಟಿಯನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಿದೆ ಎಂದರು.

ದೂರವಾಣಿ ಕರೆಯಲ್ಲಿ ನ್ಯೂಜರ್ಸಿಯ ಮಧುರವರು ಬೆಂಗಳೂರಿನ ಹಲವು ಸಮಸ್ಯೆಗಳಿಗೆ ನಿಮ್ಮ ಉತ್ತರವೇನು ಎಂದಾಗ ಹಣದ ಕೊರತೆಗಿಂತ ಹೆಚ್ಚಾಗಿ ಇಂದು ಅಧಿಕಾರಸ್ಥಾನದಲ್ಲಿರುವವರಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಬಿಜೆಪಿ ಕಾಂಗ್ರೆಸ್ ನ ಆಡಳಿತ ನೋಡಿರುವ ಕನ್ನಡ ಜನತೆ ಕುಮಾರಸ್ವಾಮಿಗೆ ಆಡಳಿತ ನೀಡಿದಲ್ಲಿ, ಒಂದುಕ್ಷಣ ವ್ಯರ್ಥ ಮಾಡದೇ ದಿನದ ಇಪ್ಪತ್ನಾಲ್ಕು ಘಂಟೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅದಕ್ಕಾಗಿ ಒಂದು ಅವಕಾಶ ನೀಡಿ ಎಂದು ಕುಮಾರಸ್ವಾಮಿಯವರು ಕರೆ ನೀಡಿದರು.

ಕೋಲಾರದ ಸುಧಾಕರಗೌಡರವರು ಕೋಲಾರ ನೀರಾವರಿ ಹೋರಾಟಕ್ಕೆ ನಿಮ್ಮ ಸಹಕಾರ ಬೇಕೆಂದು ಕೇಳಿಕೊಂಡಾಗ, ಕುಡಿಯುವ ನೀರಿನ ಸಮಸ್ಯೆಗೆ ಹಲವು ಸರ್ಕಾರಗಳು ಪೊಳ್ಳು ಆಶ್ವಾಸನೆಯನ್ನು ಮಾತ್ರ ನೀಡುತ್ತಾ ಬಂದಿವೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ರೂಪುರೇಷೆಗಯನ್ನು ನಾವೀಗಾಗಲೇ ರೂಪಿಸಿದ್ದು ಒಂದೊಂದು ಬಿಡಿಗಾಸೂ ಜನತೆಗೆ ನೀರನ್ನು ಒದಗಿಸುವ ಸಲುವಾಗಿಯೇ ಸದ್ಭಳಕೆಯಾಗಲಿದೆ ಎಂದರು.

ಶಿವಮೊಗ್ಗದ ಪುಟ್ಟೇಗೌಡರು ಅಡಕೆ ಬೆಳೆ ನಾಶಕ್ಕೆ ಪರಿಹಾರ ಕ್ರಮದ ಆಲೋಚನೆಗಳೇನಿವೆ ಎಂದು ಪ್ರಶ್ನಿಸಿದಾಗ, ಮಧ್ಯವರ್ತಿಗಳು ತಿನ್ನುತ್ತಿರುವ ಲಾಭವನ್ನು ತಗ್ಗಿಸಿ ಎಲ್ಲಾ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ನಂತರ ಮಾತನಾಡಿದ ವೈ ಎಸ್ ವಿ ದತ್ತರವರು ಕುಮಾರಸ್ವಾಮಿಯವರೇ ಸಮಸ್ಯೆಗೆ ಉತ್ತರ ಎನ್ನುವುದು ನಮಗೆ ತಿಳಿದಿದ್ದರೂ ಅಧಿಕಾರ ದೊರಕಿಸಿಕೊಡುವಲ್ಲಿನ ವಾತಾವರಣ ಮಾತ್ರ ಈ ತನಕ ನಿರ್ಮಾಣವಾಗಿರಲಿಲ್ಲ. ಯುವಕರಲ್ಲಿ ಕೆಲವು ಸಮೂಹ ಸನ್ನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಎಸಗಿರುವ ಅನ್ಯಾಯವನ್ನು ಪುರಾವೆ ಸಹಿತ ಖಂಡಿಸಿ ಜೆಡಿಎಸ್ ನ ಮಹತ್ತ್ವವನ್ನು ಎಲ್ಲರಿಗೂ ತಿಳಿಸುವ ಕಾರ್ಯ ಎಲ್ಲಾ ಕಾರ್ಯಕರ್ತರಿಂದ ಆಗಬೇಕಿದೆ ಎಂದರು.

Contact us

We're not around right now. But you can send us an email and we'll get back to you, asap.

Questions, issues or concerns? I'd love to help you!

Click ENTER to chat